History Background

ಇತಿಹಾಸ


ಶ್ರೀ ದೇವಿಯು ಗೋಚರಿಸಿದ ಬಗೆ;


ಶ್ರೀದೇವಿಯ ಸನ್ನಿದಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ಅಷ್ಟಮಂಗಲ ಪ್ರಶ್ನೆಯನ್ನು ಇಟ್ಟಾಗ ಸುಮಾರು 800 ವರುಷಗಳ ಹಿಂದೆಯೇ ಈ ಮೂರ್ತಿಯು ಗೋಚರಿಸಿದ್ದು , ಇದು ಸ್ವಯಂ ಮೂಡಿಬಂದದ್ದು ಎಂತಲೂ ವೇದಿತವಾಗಿದೆ. ಈಕುರಿತು ನಮ್ಮ ಹಿರಿಯರನ್ನು ವಿಚಾರಿಸಿದಾಗ ಒಂದು ಸಭ್ಯ ಆಕಳು ಈ ಸ್ಥಳದಲ್ಲಿ ದಿನವೂ ಬಂದು ವಿಗ್ರಹದಮೇಲೆ ಹಾಲು ಸುರಿಸಿ ಹೋಗುತ್ತಿರುವುದು ಗಮನಕ್ಕೆ ಬಂದು ಪೂಜಾ ಕೈಂಕರ್ಯಗಳು ಅಂದಿನಿಂದ ಪ್ರಾರಂಭವಾಯಿತು. ಇದಲ್ಲದೆ ಅಷ್ಟಮಂಗಲದಲ್ಲಿ ಈ ಸ್ಥಳವು “ ಸುಪದ್ಮ” ಎನ್ನುವ ಲಕ್ಷಣವನ್ನು ಹೊಂದಿದ್ದು (ತಿರುಪತಿ ಕ್ಷೇತ್ರದಹಾಗೆ) ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿಯುವ ನೀರಿನ ಮೇಲ್ಮೈಯಲ್ಲಿ ಕುಳಿತ ದೇವತೆಯನ್ನು ಜಲದುರ್ಗಾ ಎಂದು ಕರೆಯಬಹುದು ಎಂತಲೂ ವಿಧಿತವಾಗಿದೆ.



ಉತ್ಸವಾದಿಗಳು


ಚೈತ್ರ ಶುದ್ಧಪ್ರತಿಪದೆಯಿಂದ ವಸಂತ ನವರಾತ್ರಿಉತ್ಸವ ಮತ್ತು ನಿರಂತರ ಭಜನಾಸಪ್ತಾಹ (ಕಟಗಾರಕೊಪ್ಪ, ಕಿತ್ರೆ, ಕೋಟಖಂಡ, ಹೂತ್ಕಳ ,ಮಾರುಕೇರಿ,ಕೋಣಾರ ) ಗ್ರಾಮವಾರು ನಡೆಯುತ್ತದೆ. ಶರನ್ನವರಾತ್ರಿಉತ್ಸವ ಪ್ರತಿದಿನ ಚಂಡಿಹವನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದೆ. ಕಾರ್ತೀಕ ಬಹುಳ ಅಮಾವಾಸ್ಯೆಗೆ ದೀಪಾರಾಧನೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಮಾಘಶುದ್ಧ ಅಷ್ಟಮಿಯಿಂದ ದಶಮಿಯ ಪರ್ಯಂತ ಜಾತ್ರಾ ವಿಶೇಷ.



ಭೌಗೋಳಿಕ ಹಿನ್ನೆಲೆ


ವಾಗರ್ಥಾ ವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ , ಮಲೆನಾಡಿನ ಸೆರಗಿನಲ್ಲಿರುವ ಉತ್ತರ ಕನ್ನಡಜಿಲ್ಲೆಯು ಪ್ರಸಿದ್ಧಯಾತ್ರಾಸ್ಥಳವಾಗಿದ್ದು, ಗೋಕರ್ಣ ಇಡಗುಂಜಿ ಮುರ್ಡೇಶ್ವರ ಮಾರಿಕಾಂಬಾದೇವಾಲಯ ಬನವಾಸಿ ಗಳಂತಹ ಪ್ರಸಿದ್ಧ ಯಾತ್ರಾಕ್ಷೇತ್ರಗಳಂತೆಯೇ ಕಂಗೊಳಿಸುತ್ತಿದೆ ಸಶಿವಶಾಂತಿಕಾ ಪರಮೇಶ್ವರೀ ದೇವಿದೇವಸ್ಥಾನ. . ಉತ್ತರಕನ್ನಡಜಿಲ್ಲೆಯ ಭಟಕಳ ತಾಲೂಕಿನಿಂದ 8 ಕಿಲೋಮೀಟರ್ ದೂರದಲ್ಲಿರುವ ದೇವಾಲಯ ಮಾರುಕೇರಿ ಪಂಚಾಯತವ್ಯಾಪ್ತಿಗೆ ಸಂಬಂಧಿಸಿದ್ದು ಕಿತ್ರೆ ಗ್ರಾಮದಲ್ಲಿರುತ್ತದೆ.



ಮಹಾತ್ಮರ ಸಾಮಿಪ್ಯ;


ಅಷ್ಟಮಂಗಲದಲ್ಲಿ ವಿಧಿತವಾದ ಪ್ರಕಾರ ಶ್ರೀ ಕ್ಷೇತ್ರ ಕೊಲ್ಲೂರಿನಿಂದ ಬಂದ ಒಬ್ಬಸಾಧಕನು ಬೇಣಂದೂರು ಮಾರ್ಗವಾಗಿ ಈಸ್ಥಳಕ್ಕೆಬಂದು ಆವ್ಯಕ್ತಿಯು ಅನುಷ್ಠಾನ ಮತ್ತು ತಪಸ್ಸುಗಳನ್ನು ಮಾಡಿ ಆತ್ಮಶಕ್ತಿಯನ್ನು ಈಮೂರ್ತಿಯಲ್ಲಿ ಕೇಂದ್ರೀಕರಿಸಿ ಇಲ್ಲಿಯೇ ಸದ್ಗತಿಯನ್ನು ಹೊಂದಿರುವದರಿಂದ ಈ ಕ್ಷೇತ್ರಕ್ಕೆ ಬೇಣಂದೂರು ದುರ್ಗಾಪರಮೇಶ್ವರೀ ದೇವಿ ಅಂತಲೂ ಹೆಸರು ಬಂದಿದೆ . ಈಕ್ಷೇತ್ರವು ಸುತ್ತಲೂ ಬೇಣಗಳನ್ನು( ಗುಡ್ಡ ಬೆಟ್ಟಗಳನ್ನು ) ಹೊಂದಿದ್ದರಿಂದ ಈ ಕ್ಷೇತ್ರಕ್ಕೆ ಬೇಣಂದೂರು ದುರ್ಗಾಪರಮೇಶ್ವರೀ ದೇವಿ ಅಂತಲೂ ಹೆಸರು ಬಂದಿದೆ. ಈದೇವಸ್ಥಾನಕ್ಕೆ ಸಂಬಂಧಪಟ್ಟ ಭಕ್ತಾದಿಗಳು ಕೇರಳ ಕರ್ನಾಟಕ ಆಂದ್ರ ಚನ್ನೈ, ಮಹಾರಾಷ್ಟ್ರ ಗೋವಾ ದಲ್ಲಿ ನಲೆಸಿರುತ್ತಾರೆ . ಸುಮಾರು ಐದಾರು ದಶಕಗಳಹಿಂದೆ ಭಗವಾನ್ ಶ್ರೀಧರ ಸ್ವಾಮಿಗಳು ಮಂದಿರಕ್ಕೆ ಚಿತ್ತೈಸಿದ್ದು ತಾವೇ ಸ್ವತಃ ಪೂಜೆಯನ್ನು ಮಾಡಿ ಈ ಶಕ್ತಿದೇವತೆಯು ಪರಶಿವನಿಂದ ಒಡಗೂಡಿ ಇದೆ . ಆದುದರಿಂದ ಇಲ್ಲಿ ಶಿವ ಶಿವೆಯರ ಪೂಜೆಯಾಗಬೇಕು ಇನ್ನುಮುಂದೆ ಈದೇವಾಲಯವನ್ನು ಸಶಿವಶಾಂತಿಕಾ ಪರಮೇಶ್ವರೀ ದೇವಿ ದೇವಸ್ಥಾನ ಎಂದು ಕರೆಯಬೇಕೆಂದು ಆದೇಶವಿತ್ತರು. ಈ ಶಕ್ತಿದೇವತೆಯು ರಾಜರಾಜೇಶ್ವರಿಯ ಮೂರ್ತರೂಪ ವನ್ನು ಹೊಂದಿದ್ದು ಶ್ರೀಚಕ್ರದಕಲಾತತ್ವವನ್ನು ಹೊಂದಿದೆ, ಮುಂದೊಂದುದಿನ ಇಡೀ ವಸುಂಧರೆಯನ್ನೇ ಬೆಳಗುವ ಈ ಶಕ್ತಿದೇವತೆ ಯಾಗಿ ನೆಲೆನಿಲ್ಲುವ ಮಾತೆಯ ಸೇವೆಯನ್ನು ಮಾಡುವ ನೀವು ಪುಣ್ಯಾತ್ಮರು ಎಂದು ಹರಸಿದರು. ಈ ದೇವಸ್ಥಾನದ ಜೀರ್ಣೋದ್ಧಾರವು ಮುಂದೊಂದುದಿನ ಯತಿವರೇಣ್ಯ ಮಹಾತ್ಮರಿಂದ ಆಗಲಿದೆ ಎಂದು ಸೂಚಿಸಿದರು. ಶ್ರೀಶ್ರೀಮದ್ ರಾಘವೇಂದ್ರ ಭಾರತಿ ಸ್ವಾಮಿಗಳು ರಾಮಚಂದ್ರಾಪುರ ಮಠ ಇವರು ದೇವಸ್ಥಾನಕ್ಕೆ ಚಿತ್ತೈಸಿದ್ದು ಅವರಮಾರ್ಗದರ್ಶನದಲ್ಲಿ ಗರ್ಭಗುಡಿಯ ಶಿಖರಕಲಶ ಪ್ರತೀಷ್ಠೆಯಾಗಿದೆ. ಮತ್ತು ಒಂದುವಾರಗಳ ಕಾಲ ಇಲ್ಲಿ ಮೊಕ್ಕಾಂಮಾಡಿದ್ದು ಶ್ರೀದೇವಿಯ ಶಕ್ತಿಯು ತುಂಬಾ ವಿಶೇಷವಾಗಿದ್ದು, ಲೋಕವನ್ನು ಬೆಳಗುವ ಮಹಾಮಾತೆಯಾಗಿದ್ದಾಳೆ ಎಂದು ಆಶೀರ್ವಚನದಲ್ಲಿ ನುಡಿದರು. ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರಮಠ ಇವರು ಪೀಠಕ್ಕೆಬಂದಮೇಲೆ ಈದೇವಸ್ಥಾನದ ಜೀರ್ಣೋದ್ದಾರ ಮತ್ತು ಪುನರ್ ಪ್ರತಿಷ್ಠೆಯಸಲುವಾಗಿ, ಶ್ರೀ ಸಂಸ್ಥಾನವು ನಮ್ಮ ಸೀಮೆಗೆ ಆಗಮಿಸಿದಾಗ ನಾವು ನಿವೇದನೆ ಮಾಡಿಕೊಂಡಾಗ ತಾವೇ ಈಸ್ಥಳಕ್ಕೆ ಭೇಟಿನೀಡಿ ನಮ್ಮ ನಿವೇದನೆ ಮತ್ತು ಬೇಡಿಕೆಯಂತೆ ಶ್ರೀಗಳ ಮಾರ್ಗದರ್ಶನ ಮತ್ತು ದಿವ್ಯೋಪಸ್ಥಿತಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ, ಶಿಖರಕಲಶ ಪ್ರತೀಷ್ಠೆ ಮತ್ತು ಬ್ರಹ್ಮಕಲಶೋತ್ಸವಾದಿಗಳು ನಡೆದಿವೆ



ದೇವಸ್ಥಾನದ ಪರಿವಾರ ದೇವರುಗಳು;


ಸರ್ವಕಾರ್ಯಗಳಿಗೂ , ವಿಘ್ನಕಾರಕನು ಮತ್ತು ವಿಘ್ನಹಾರಕನೂ ಆದ ಮಹಾಗಣಪತಿಯು ಶ್ರೀದೇವರ ನೈರುತ್ಯಭಾಗದಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಸಮಸ್ತ ಭಜಕರ ಸರ್ವವಿಘ್ನಗಳನ್ನು ನಿವಾರಿಸಿ ಸಿದ್ಧಿಯನ್ನು ಬುದ್ಧಿಯನ್ನು ಕರುಣಿಸುವವನಾಗಿದ್ದಾನೆ. ಶ್ರೀಕ್ಷೇತ್ರದ ಮತ್ತು ಸಮಸ್ತ ಭಜಕರ ರಕ್ಷಾದೇವತೆಯಾಗಿ ಶ್ರೀ ವೀರಭದ್ರ ದೇವರ ಭವ್ಯಮೂರ್ತಿಯನ್ನು ದೇವಸ್ಥಾನದ ಈಶಾನ್ಯದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ್ದು, ಪ್ರತ್ಯೇಕ ಗರ್ಭಗುಡಿಯನ್ನು ಹೊಂದಿದೆ. . ಆಳೆತ್ತರದ ಭವ್ಯಮೂರ್ತಿಯು ನೋಡಲು ರುದ್ರರಮಣೀಯವಾಗಿಯೂ, ನಯನಮನೋಹರವಾಗಿಯೂ, ಇದ್ದು ಜನರ ಸಂಕಷ್ಟಗಳನ್ನು ಪರಿಹರಿಸಿಕೊಡುವ ವಿಶೇಷ ಶಕ್ತಿಇರುವ ವೀರಭದ್ರನು ಇಲ್ಲಿನ ಆಕರ್ಶಣೀಯ ಕೇಂದ್ರಬಿಂದುವಾಗಿದ್ದಾನೆ. ಕ್ಷೇತ್ರಪಾಲ- ವೀರಭದ್ರಗುಡಿಯ ಪಕ್ಕದಲ್ಲಿಯೇ ಕ್ಷೇತ್ರಪಾಲಗುಡಿಇದ್ದು ಇಲ್ಲಿಯ ಕ್ಷೇತ್ರಪಾಲಕನಾಗಿ ಪೂಜೆ ಸ್ವೀಕರಿಸುತ್ತಿದ್ದಾನೆ. ಅರೆವೀರ ದೇವಸ್ಥಾನದಿಂದ ಸುಮಾರು 1.5 ಕಿ.ಮೀ. ದೂರದಲ್ಲಿ ಅರೆವೀರ ಎನ್ನುವ ಹೆಸರಿನ ಪರಿವಾರದೇವತೆಯು ಬಯಲುಮಂದಿರವನ್ನು ಹೊಂದಿದ್ದು, ವಿಶೇಷವಾಗಿ ಗೋರಕ್ಷಣೆ ಮತ್ತು ಕ್ರೂರಮ್ರಗಗಳಿಂದ ಬೆಳೆಯರಕ್ಷಣೆ ಮಾಡುವ ದೈವವಿದಾಗಿದೆ. .ಅಲ್ಲದೆ ಕಳ್ಳರು ಭಯಹುಟ್ಟಿಸುವವರ ವಿರುದ್ದ ಹೊಯ್ಲು( ದೂರು) ಕೊಡುವಸ್ಥಳ ಎಂದೇ ಪ್ರತೀತಿಯಾಗಿದೆ. ತ್ರಿಶೂಲರೂಪದಲ್ಲಿ ಹರಕೆಯನ್ನು ಒಪ್ಪಿಸಿಕೊಂಡ ಈಅರೆವೀರನು ತ್ರಿಶೂಲರೂಪದಲ್ಲಿಯೇ ದೇವರಾಗಿ ಪ್ರಸಿದ್ಧನಾಗಿರುವನು. ದೇವಸ್ಥಾನದ ಆಗ್ನೇಯದಿಕ್ಕಿನಲ್ಲಿ ನಾಗಬನವಿದ್ದು ವಿಶೇಷವಾಗಿ ಈಸ್ಥಳದ ರಕ್ಷಾದೇವತೆಯಾಗಿದೆ. ನಾಗಬನದ ಹತ್ತಿರದಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು ಏಕಾಂತದಲ್ಲಿ ತಪಸ್ಸು ಮಾಡಿದ ಗುಹೆ ಇದೆ. ಈಗುಹೆ ಮತ್ತು ನಾಗಬನಗಳೆರಡೂ ಪ್ರಾಕ್ರತಿಕವಾಗಿ ಎತ್ತರದಲ್ಲಿದ್ದು, ಮನಸ್ಸಿಗೆ ಶಾಂತಿ ಮತ್ತು ಸಮಾಧಾನ ಕೊಡುವ ತಾಣವಾಗಿದೆ. ನಾಗಬನದ ಹತ್ತಿರ ಮಹಾಸತಿ ಜಟ್ಟಿಗೇಶ್ವರ ಚೌಡೇಶ್ವರೀ ದೇವಿಯಸನ್ನಿದಾನವಿದ್ದು, ಭಕ್ತರಿಗೆ ಅನುಗ್ರಹ ಕಾರಕವಾಗಿದೆ,



ಮಹಿಮೆ ಮತ್ತು ಪವಾಡಗಳು


ಬಹಳಪೂರ್ವದಲ್ಲಿ ಈದೇವಸ್ಥಾನಕ್ಕೆಬಂದು ತಾಯಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದಾಗ (ಮದುವೆ, ಮುಂಜಿ, ವಿಶೇಷಕಾರ್ಯಕ್ರಮಗಳು ಬಂದಾಗ) ಬಟ್ಟಲು ಆಭರಣವನ್ನು ನೀಡುತ್ತಿದ್ದಳಂತೆ ಮಹಾತಾಯಿ, ಸಮಾರಂಭ ಮುಗಿದಮೇಲೆ ತಂದಷ್ಟು ಚಿನ್ನವನ್ನು ತಾಯಿಗೆತಿರುಗಿ ಮುಟ್ಟಿಸುವದು ಇಲ್ಲಿಯ ಜನರ ವಾಡಿಕೆಯಾಗಿತ್ತು. ಬಹಳಪೂರ್ವದಲ್ಲಿ ದಿನವೂನಡೆಯುವ ಪೂಜೆಗೆ ಅರ್ಚಕರು ಬಹಳದೂರದಿಂದ ಬರಬೇಕಾಗಿತ್ತು, ಆಗವೀರಭದ್ರದೇವರು ತಾನೇ ರಕ್ಷಣೆಗೆನಿಂತು ದಿನವೂ ಅರ್ಚಕರನ್ನು ಕರೆದು ಕಳಿಸುವ ದನ್ನು ಮಾಡುತ್ತಿದ್ದ ಎನ್ನುವ ಪ್ರತೀತಿ ಈಗಲೂ ಇದೆ. ಈಗಲೂ ಇಲ್ಲಿಯ ಸಕಲ ಜೀವಿಗಳ ರಕ್ಷಣೆಯ ಹೊಣೆ ತನ್ನದೇ ಎನ್ನುವರೀತಿಯಲ್ಲಿ ಸೇವೆ ಸ್ವೀಕರಿಸಿಕೊಳ್ಳುತ್ತಿದ್ದಾನೆ ಆರಕ್ಷಕ ವೀರಭದ್ರ . ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ನಾಗಪ್ರತೀಷ್ಠೆಯ ಅಂಗವಾಗಿ ನಡೆದ ಹವನಕಾಲದಲ್ಲಿ, ಸ್ವಾಹಾಕಾರದಲ್ಲಿ ಹವಿಸ್ಸನ್ನು ಅರ್ಪಿಸುವಾಗ, ಸ್ವತಃ ಸರ್ಪವೇ ಬಂದು ಹೋಮ ವೀಕ್ಷಣೆ ಮಾಡಿದ್ದನ್ನು ನೆರೆದ ಜನಸ್ತೋಮವೇ ಕಂಡು ಬೆರಗಾಗಿದ್ದು , ಈಸ್ಥಳದ ಸತ್ಯವಿಶೇಷ. ದೇವಾಲಯದ ಎದುರಿನಲ್ಲಿ ಒಂದು ಸುಂದರ ಕೆರೆಯರೂಪದಲ್ಲಿರುವ ಈ ಪುಷ್ಕರಿಣಿಯಲ್ಲಿ ನೀರು ಈಶಾನ್ಯ ದಿಕ್ಕಿನಿಂದ ಬರುತ್ತಿದ್ದು ಆಯುರ್ವೇದದ ಗಿಡ ಮೂಲಿಕೆಗಳ ಮಧ್ಯೆ ಪ್ರವಹಿಸುವ ಈನೀರು ತೀರ್ಥರೂಪವನ್ನು ಹೊಂದಿದೆ. ಶ್ರೀದೇವಿಯ ದಿವ್ಯದ್ರಷ್ಠಿಯು ಸದಾ ಪುಷ್ಕರಿಣಿಯಮೇಲಿರುವದರಿಂದ ಪ್ರಾಶನ ಮತ್ತು ಪ್ರೋಕ್ಷಣೆಯಿಂದ ಸರ್ವರೋಗ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.